ಆಲ್‍ಖ್ವಾರಿಜಿó್ಮೀ, ಮಹಮದ್ ಇಬ್ನ್ ಮೂಸಾ
(ಸು.780-850) ಅರೇಬಿಯದ ಗಣಿತಜ್ಞ. ಗ್ರೀಕ್ ಗಣಿತಜ್ಞ ಡಯೊಫಂಟಸನ ಗಣಿತವನ್ನು ಸಂಗ್ರಹಿಸಿ ಸಂರಕ್ಷಿಸಿ ವಿಸ್ತರಿಸಿದ ಕೀರ್ತಿ ಇವನದು. ಇವನು ರಚಿಸಿದ ಗಣಿತಗ್ರಂಥದ ಹೆಸರು ಇಲ್ಮ್ ಆಲ್‍ಜಬರ್ ವಾಲ್ ಮುಕಾಬಲ್ (ಸ್ಥಾನಪಲ್ಲಟ ಮತ್ತು ನಿರ್ಮೂಲ ಶಾಸ್ತ್ರ). ಅರಬ್ಬೀ ಪದ ಆಲ್‍ಜಬರ್ (ಸ್ಥಾನಪಲ್ಲಟ) ಲ್ಯಾಟಿನ್ ಭಾಷೆಗೆ ಆಲ್‍ಜೀಬ್ರ (ಬೀಜಗಣಿತ) ಆಗಿ ರೂಪಾಂತರಗೊಂಡಿತು; ಮತ್ತು ಢಯೊಫಂಟಿಸ್ ಸ್ಥಾಪಿಸಿದ ಗಣಿತವಿಭಾಗಕ್ಕೆ ಈ ಹೆಸರು ಶಾಶ್ವತವಾಯಿತು. ಆಲ್‍ಖ್ವಾರಿಜ್ಮೀಯ ಹೆಸರು ಲ್ಯಾಟಿನ್ನಿನಲ್ಲಿ ಆಲ್‍ಗಾರಿಸ್ಮû ಎಂದಾಯಿತು. ಗಣನೆಯ ವಿಧಾನ ಎಂಬರ್ಥ ಇದಕ್ಕೆ ಬಂತು. ಆಲ್‍ಖ್ವಾರಿಜ್ಮೀó ಭರತಖಂಡದ ಮೂಲಗಳಿಂದಲೂ ಗ್ರೀಕ್ ಮೂಲಗಳಿಂದಲೂ ವಿಪುಲವಾಗಿ ನೂತನ ಗಣಿತಭಾವನೆಗಳನ್ನು ಸ್ವೀಕರಿಸಿ ವಿಶ್ಲೇಷಿಸಿ ಸಂಗ್ರಹಿಸಿದ. ಭಾರತೀಯ ದಾಶಮಿಕ ಅಂಕೆಗಳನ್ನು (ಸೊನ್ನೆಯ ಸಹಿತ) (“ಅಂಕಗಣಿತದಲ್ಲಿ ಭಾರತೀಯರ ಶಿಖರಪ್ರಾಯವಾದ ಕಾರ್ಯವೇನೆಂದರೆ ಸ್ಥಾನಾನುಗುಣ್ಯವಾದ ದಾಶಮಿಕ ಪದ್ಧತಿಯನ್ನೊಳಗೊಂಡ ಸಂಖ್ಯಾಕ್ರಮವನ್ನು ಏರ್ಪಡಿಸಿದುದು”-ಸಿ.ಎನ್. ಶ್ರೀನಿವಾಸೈಯಂಗಾರ್ ಅವರ ಗಣಿತ ಶಾಸ್ತ್ರದ ಚರಿತ್ರೆಯಲ್ಲಿ) ಇವನು ಸ್ವೀಕರಿಸಿ ಅವುಗಳ ಮಹತ್ತ್ವವನ್ನು ಅರಿತು ತನ್ನ ಬರೆಹಗಳಲ್ಲಿ ಬಳಸಿಕೊಂಡ. ಮುಂದೆ ಈತನ ಕೃತಿಗಳನ್ನು ಲ್ಯಾಟಿನ್ನಿಗೆ ಅನುವಾದಿಸುವಾಗ ಇವನ್ನು ಅರೆಬಿಕ್ ಅಂಕೆಗಳೆಂದೇ ಭ್ರಮಿಸಿದರು. ಪೂರ್ವಪಶ್ಚಿಮಗಳನ್ನು, ಪ್ರಾಚೀನ-ಆಧುನಿಕಗಳನ್ನು ಜೋಡಿಸುವ ಸೇತುವೆಯಾಗಿದ್ದಾನೆ ಆಲ್‍ಖ್ವಾರಿಜ್ಮೀ.		 (ನೋಡಿ- ಅವಿಸೆನ್ನ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ